ದೇವರಾಯನ ದುರ್ಗ-
	ಭಾರತದ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯಲ್ಲಿ ತುಮಕೂರು ತಾಲ್ಲೂಕಿಗೆ ಸೇರಿದ ಒಂದು ದುರ್ಗ. ತುಮಕೂರಿಗೆ  ಪೂರ್ವದಲ್ಲಿ 14 ಕಿ.ಮೀ. ದೂರದಲ್ಲಿದೆ. ಸಮುದ್ರಮಟ್ಟದಿಂದ 3,896 ಅಡಿ ಎತ್ತರವಾಗಿರುವ ಅದೇ ಹೆಸರಿನ ಬೆಟ್ಟದ ಮೇಲೆ ಏಳು ದ್ವಾರಗಳುಳ್ಳ ಕೋಟೆ ಇದೆ. ಹಿಂದೆ ಅಂಧಕನೆಂಬ (ಲಿಂಗಕ) ದರೋಡೆಕೋರ ಈ ಬೆಟ್ಟದಲ್ಲಿ ವಾಸವಾಗಿದ್ದನೆಂದೂ ಕರ್ನಾಟಕ ರಾಜ ಹೇಮಚಂದ್ರನ ಮಗ ಸುಮತಿ ಎಂಬವನು ಅವನನ್ನು ಸೋಲಿಸಿ ಇದನ್ನು ವಶಪಡಿಸಿಕೊಂಡನೆಂದೂ ಐತಿಹ್ಯವಿದೆ. ಮತ್ತೊಂದು ಐತಿಹ್ಯದ ಪ್ರಕಾರ ಗಂಧರ್ವನೊಬ್ಬ ಆನೆಯ ರೂಪದಲ್ಲಿ ಈ ಬೆಟ್ಟದಲ್ಲಿ ವಾಸವಾಗಿದ್ದನೆಂದೂ ಒಂದು ದಿನ ಮದೋನ್ಮತ್ತನಾಗಿ ಕಡಿದಾದ ಬಂಡೆಯನ್ನೇರಲು ಹೋಗಿ ಜಾರಿಬಿದ್ದು ಸತ್ತದ್ದರಿಂದ ಆ ಸ್ಥಳಕ್ಕೆ ಆನೆಬಿದ್ದಸರಿ, ಆನೆಬಿದ್ದ ಝರಿ ಎಂದೂ ಹೆಸರು ಬಂದಿತೆಂದೂ ಇನ್ನೊಂದು ಕಥೆಯಿದೆ. ಹೊಯ್ಸಳರ ಕಾಲದಲ್ಲಿ ಬೆಟ್ಟದ ಮೇಲೆ ಆನೆಬಿದ್ದಸರಿ (ಆನೆ ಬಿದ್ದ ಝರಿ) ಎಂಬ ಹೆಸರಿನ ಊರಿತ್ತೆಂದು ತಿಳಿದುಬರುತ್ತದೆ. ವಿಜಯನಗರ ಕಾಲದಲ್ಲಿ ಈ ದುರ್ಗಕ್ಕೆ ಕರಿಗಿರಿ ಎಂಬ ಹೆಸರಿತ್ತು. ಇಲ್ಲಿನ ಹಳ್ಳವೊಂದಕ್ಕೆ ಅಡ್ಡಲಾಗಿ ಬುಕ್ಕಸಮುದ್ರವೆಂಬ ಕೆರೆಯನ್ನು ನಿರ್ಮಿಸಿದ್ದರೆಂದು ತಿಳಿಯುತ್ತದೆ. ಅನಂತರ ಈ ದುರ್ಗಕ್ಕೆ ಜಡಕ ಎಂಬ ಪಾಳೆಯಗಾರನ ವಶವಾಗಿದ್ದರಿಂದ ಇದಕ್ಕೆ ಜಡಕದುರ್ಗವೆಂಬ ಹೆಸರು ಬಂತು. 1696ರಲ್ಲಿ ಚಿಕ್ಕದೇವರಾಯ ಒಡೆಯರು ಇದನ್ನು ವಶಪಡಿಸಿಕೊಂಡ ಮೇಲೆ ಇದಕ್ಕೆ ದೇವರಾಯನದುರ್ಗ ಎಂಬ ಹೆಸರು ಬಂತು.

ಬೆಟ್ಟದಲ್ಲಿ ಮೂರು ಪ್ರತ್ಯೇಕ ಹಂತಗಳಿವೆ. ಕೆಳಗಿನ ಹಂತದಲ್ಲಿ ದೇವರಾಯನ ದುರ್ಗ ಗ್ರಾಮವೂ ಒಂದನೆಯ ಕಂಠೀರವ ನರಸರಾಜ ಒಡೆಯ ಕಟ್ಟಿಸಿದ ದ್ರಾವಿಡ ಶೈಲಿಯ ದುರ್ಗಾನರಸಿಂಹ ದೇವಾಲಯವೂ ಇವೆ. ಸಂಜೀವರಾಯನೆಂದು ಕರೆಯುವ ಹನುಮಂತನ ದೇವಸ್ಥಾನವೂ ಇಲ್ಲಿದೆ. ಮಧ್ಯದ ಹಂತದಲ್ಲಿ ಮಿಶನರಿ ಬಂಗಲೆ ಮತ್ತು ಸರ್ಕಾರಿ ಪ್ರವಾಸಿಮಂದಿರವೂ ರಾಮತೀರ್ಥ, ಧನುಷ್ ತೀರ್ಥ ಎಂಬ ಎರಡು ದೊಣೆಗಳೂ ಇವೆ. ಹತ್ತಿರದ ಗುಹೆಯೊಂದರಲ್ಲಿ ರಾಮ, ಸೀತೆ ಮತ್ತು ಲಕ್ಷ್ಮಣರ ವಿಗ್ರಹಗಳಿವೆ.

	ಮೂರನೆಯ ಹಂತದಲ್ಲಿ ಕುಂಬೀನರಸಿಂಹನ ದೇವಸ್ಥಾನವಿದೆ. ಇದು ಗರ್ಭಗೃಹ, ಸುಖನಾಸಿ, ನವರಂಗ ಮತ್ತು ಮುಖಮಂಟಪಗಳಿಂದ ಕೂಡಿದ್ದು. ಇಲ್ಲಿ ನರಸಿಂಹತೀರ್ಥ, ಪಾದತೀರ್ಥ, ಪರಾಶರತೀರ್ಥ ಎಂಬ ಮೂರು ಪವಿತ್ರ ದೊಣೆಗಳುಂಟು. ಸ್ವಲ್ಪ ಎತ್ತರದಲ್ಲಿ ಗರುಡನ ಗುಡಿಯೂ ದೀವಿಗೆ ಗುಂಡು ಎಂದು ಕರೆಯಲ್ಪಡುವ ದೊಡ್ಡ ಬಂಡೆಯೂ ಇವೆ. ತಮ್ಮ ಇಷ್ಟಪೂರ್ತಿಗಾಗಿ ಹರಕೆ ಕಟ್ಟಿಕೊಂಡವರು ಇಲ್ಲಿರುವ ದೀಪವನ್ನು ಬೆಳಗಿಸುತ್ತಾರೆ, ಬೆಟ್ಟದಿಂದ ಸ್ವಲ್ಪದೂರದಲ್ಲಿರುವ ಅರಣ್ಯ ಇಲಾಖೆಯ ವಿಶ್ರಾಂತಿ ಗೃಹದ ಬಳಿ ಆರತಿ ಬಂಡೆ ಇದೆ. ಮೈಸೂರು ರಾಜರು ಬಂದಾಗ ಆ ಸ್ಥಳದಲ್ಲಿ ಆರತಿ ಬೆಳಗಿ ಅವರನ್ನು ಸ್ವಾಗತಿಸುತ್ತಿದ್ದುದರಿಂದ ಆ ಬಂಡೆಗೆ ಈ ಹೆಸರು ಬಂತೆಂದು ಪ್ರತೀತಿ. ಇದರ ಹತ್ತಿರವೇ ನಾಮದ ಚಿಲುಮೆ ಇದೆ. ಕಡೆದಿರುವ ಒರಳುಕಲ್ಲಿನಲ್ಲಿನಿಂದ ಇಲ್ಲಿ ನೀರು ಸದಾ ಹರಿಯುತ್ತಿರುತ್ತದೆ. ಇಲ್ಲಿರುವ ಜಲಗುಂಡಿ ಎಂಬ ಕೊರಕಲ್ಲಿನಲ್ಲಿ ಮಂಗಲೀ ನದಿಯೂ ಜಯತೀರ್ಥವೆಂಬ ಚಿಕ್ಕ ಚಿಲುಮೆಯಿಂದ ಜಯಾ ನದಿಯೂ ಹರಿದು ತಪ್ಪಲಲ್ಲಿ ಒಂದಾಗಿ ಜಯಮಂಗಲೀ ನದಿಯಾಗಿ ಮುಂದುವರೆಯುತ್ತವೆ. ಈ ಬೆಟ್ಟದಲ್ಲಿ ಶಿಂಷಾನದಿ ಉಗಮಿಸುವುದೆಂದೂ ಹೇಳುತ್ತಾರೆ. ಪ್ರತಿ ವರ್ಷ ಚೈತ್ರಮಾಸದಲ್ಲಿ ಇಲ್ಲಿ ದುರ್ಗಾನರಸಿಂಹನ ಜಾತ್ರೆ ನಡೆಯುತ್ತದೆ. ಇತ್ತೀಚಿಗೆ ಈ ಸ್ಥಳ ಪ್ರಮುಖ ಪ್ರವಾಸಿಕೇಂದ್ರವಾಗಿ ಅಭಿವೃದ್ಧಿಯಾಗುತ್ತಿದೆ.
(ಎಸ್.ಎನ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ